ದಾಸೋಹದ ಸಂಕಣ್ಣ 

ಕಾಲ ಸು. 1160. ಶಿವಶರಣ. ವಚನಕಾರ. ಸಂಗಣ್ಣ ಎಂತಲೂ ಇವನನ್ನು ಕರೆವುದಿದೆ. ಇವನ ಕಾಯಕ ಮಠಕ್ಕೆ ಬಂದಂಥವರಿಗೆ ಅನ್ನಸಂತರ್ಪಣ ಮಾಡುವುದಾಗಿತ್ತು. ಜೊತೆಗೆ ಮಠಗಳಲ್ಲಿ ಮಕ್ಕಳಿಗೆ ಈತ ಪಾಠ ಹೇಳಿಕೊಡುತ್ತಿದ್ದ. ಊರು ಬನವಾಸಿ. ಈತ ಅಲ್ಲಿನ ಮಧುಕೇಶ್ವರನ ಪರಮಭಕ್ತ. ಈತ ಎಷ್ಟು ವಚನಗಳನ್ನು ಬರೆದಿದ್ದಾನೆಂಬುದು ತಿಳಿದಿಲ್ಲ. ಇಲ್ಲಿಯವರೆಗೆ ನೂರು ಮಾತ್ರ ದೊರೆತಿವೆ. ಶಂಭುವಿನಿಂದತ್ತ ಸ್ವಯಂಭುಗಿಂದತ್ತ ಅತಿಬಳ ನೋಡಾ ಮಾತುಳಂಗ ಮಧುಕೇಶ್ವರ ಎಂಬುದು ಇವನ ವಚನಗಳ ಅಂಕಿತ ಸತ್ತ್ವಭರಿತವಾದ ಇವನ ವಚನಗಳಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭುಗಳ ಪ್ರಭಾವ ಚೆನ್ನಾಗಿ ಕಾಣುತ್ತದೆ. ವೀರಶೈವ ಸಿದ್ಧಾಂತ, ಷಟ್ಸ್ಥಲ, ಅಷ್ಟಾವರಣ-ಮುಂತಾದುವುಗಳ ವಿವರಣೆಗಳನ್ನು ಇವುಗಳಲ್ಲಿ ಕಾಣಬಹುದು.
 (ಎಂ.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ